Javari Sante #kannada #Kannadakathe

ಮನದ ಮಾತುಗಳು

28-12-2022 • 6 mins

ಜವಾರಿ ಸಂತೆ

ಭಾನುವಾರ ಬೆಳಿಗ್ಗೆ ೧೦ಘಂಟೆ ಪಕ್ಕದ ಮನೆಯವರತ್ರ  ಹರಟೆ  ಹೊಡೀತಿದ್ದೆ. ಮನೆ ಒಳಗಿಂದ ಆದೇಶ ಬಂತು - ನಾಳೆ ದೀಪಾವಳಿ ಶುರು, ಹಬ್ಬದ ಸಂತಿಗೆ ಲಗೂನ ಹೋಗ್ರಿ - ಎಳೆ ತರಕಾರಿ ಸಿಗ್ತಾವು.

ಥಟ್ ಅಂತ ನೆನಪಿಗೆ ಬಂತು - ಇವತ್ತು ಬಸವೇಶ್ವರ ನಗರ ಸಂತೆ! ಈ ನಮ್ಮ ಸಂತೆಯ ವೈಶಿಷ್ಟ್ಯವೇ ಅದು - ಸಿಕ್ಕವರ ಜೊತೆ ಹರಟೆ ಹಂಗ ಸ್ವಲ್ಪ ತರಕಾರಿನೂ ತೊಗೊಂಡಂಗ!

ಬಸವೇಶ್ವರ ನಗರ ಸಂತೆ ಅಂದ್ರ ನಮ್ಮ ಹಾವೇರಿಯಾಗ ಅದು ಬರೀ ಸಂತೆಯಲ್ಲ, ಅದೊಂದ ಎಮೋಷನ್ ಅಂತಾರಲ್ಲ ಹಂಗ. ಅದು ನಮ್ಮ ಮೋಸ್ಟ ಆಕ್ಟಿವ್ ಸೋಶಿಯಲ್ ಮೀಡಿಯಾ ಅಂದ್ರ ತಪ್ಪಾಗಂಗಿಲ್ಲ. ಹಳೆ ಗೆಳೆಯರು - ಗುರುಗಳು , ಪರಿಚಯದವರು, ಸಂಬಂಧಿಕರು ಅಷ್ಟ ಯಾಕ - ೧೦ ಸಲ ಫೋನ್ ಮಾಡಿದ್ರು ಯೆತ್ತದೇ ಇರವ್ರು! ಫೇಸ್ಬುಕ್, ಇನ್ಸ್ಟಾ ಕಡೆ ತಲೆನೂ ಹಾಕದವರು. ಎಲ್ಲಾರದೂ ಕುಶಲೋಪರಿ ಅಲ್ಲಿನೇ!

"ಮುಗಿತ್ರಿ ಸಂತಿ" , "ಓ ಹಬ್ಬದ ಸಂತಿ ಜೋರ ಐತಿ", "ಯಾವಾಗ ಬಂದಿಪ ಬೆಂಗಳೂರಿಂದ", "ಯಾವಾಗ ಹೊಂಟಿ ", "ಮುಗಿತ ರಜಾ" #ಟ್ಯಾಗ್ ಎಲ್ಲದಕ್ಕೂ.

ಒಂದ ಕಾಲದಾಗ ಈ ಸಂತಿ ಶುರುವಾದಾಗ ಬಹಳ ಮಂದಿ ಕೊಂಕ ಮಾತಾಡ್ತಿದ್ರ - ಎಷ್ಟ  ದಿನ ನಡಸ್ತಾರ ಮತ್ತು  ಮೇನ್ ಮಾರ್ಕೆಟ್ ಗೆ ಬಂದ ಬರತಾರ ಅಂತ! ಆದರ ನಮ್ಮ ಮಂದಿ ಹಗರ ಇಲ್ರಿ ಅದರಾಗೂ ರೈತ ಸೀದಾ ಜವಾರಿ ಅದು ತಾಜಾ ತರಕಾರಿ ತಂದು ಇಟ್ಟಾಗ ಯಾ ಮಗ ತಡೀತಾನ್ರಿ ನಮ್ಮನ್ನ!

ಈಗೀಗ ಮೇನ್ ಮಾರ್ಕೆಟ್ ದವ್ರ ಬಂದು ಅಂಗಡಿ ಹಾಕುವಂಗ ಆಗೇತಿ, ಇರಲಿ ತಪ್ಪೇನಿಲ್ಲ ಎಲ್ಲರಿಗೂ ಒಳ್ಳೇದಾಗ್ಲಿ.

ಆ ಎಳೆ ಬೆಂಡೆಕಾಯಿ, ಮುಳ್ಳು ಬದ್ನೇಕಾಯಿ, ಹಸರ ಹೊಳಿಯೋ ಡೊಣ್ಣಮೆಣಸಿನಕಾಯಿ, ಜವಾರಿ ಸೌತೆಕಾಯಿ, ಹಕ್ಕರಿಕಿ ಎಳೆ ಮೂಲಂಗಿ ಸಪ್ಪು ... ಆಹಾ!  ನೋಡಿದ್ರನ ಹೊಟ್ಟೆ ತುಂಬಬೇಕ್ರಿ! ಮಿರ್ಚಿ ಮಾಡೋ ಮೆಣಸಿನಕಾಯಿ ಬೇರೆ, ಕಡ್ಡಿಗಾಯಿ ಬೇರೆ , ಕೆಂಪ ಚಟ್ನಿ ಮಾಡಾಕ ಬೇರೆ. ತಾಜಾ ನಿಂಬೆಹಣ್ಣು, ಅಂಬಾಡಿ ಎಲಿ, ಜವಾರಿ ಚೋಟ ಹಿರೇಕಾಯಿ ,  ಹೋಗ್ಲಿ ಬಿಡ್ರಿಪ ಬಾಯಾಗ ನೀರ ಬರಾಕತ್ತು

ಅಷ್ಟ ಅಲ್ರಿ, ಬಿಸಿಲಿಗೆ ದಣಿವಾದವರಿಗೆ ಅಂತ ಕಬ್ಬಿನ ಹಾಲು, ಸೋಡಾ . ಹಂಗ ಚಕ್ಕಲಿ , ಸೇವು, ಘಾಟೆ, ಕರಿದಿದ್ದ ಶೇಂಗಾ , ಚಿಪ್ಸು - ಎಲ್ಲ ಒನ್ ಸ್ಟಾಪ್ ಶಾಪ್.

ಮುಂಚೆ ೪-೫ ಓಣಿಗೆ ಮಾತ್ರ ಸೀಮಿತ ಆಗಿದ್ದ ಈ ಸಂತೆ - ಈಗಂತೂ ಲಯನ್ಸ್ ಶಾಲೆ ಹತ್ತಿರದ ಧೋಭಿ ಅಂಗಡಿಯಿಂದ ಹಿಡಿದು - ನಮ್ಮ ಹಳೆ ಮೂಡಣ ಆಫೀಸ್ , ಹೇರ್ ಕಟ್ ಅಂಗಡಿಯನ್ನ ಬಳಸಿಕೊಂಡು ಬೇಕರಿ ವರೆಗೂ ಹಬ್ಬಿ - ಪ್ರತಿ ಭಾನುವಾರನೂ ವಿಜೃಂಬಿಸುತ್ತೆ.

ಆ ಸಣ್ಣ ರಸ್ತೆಗಳು, ಅಕ್ಕ ಪಕ್ಕ ನೆರಳು ನೀಡೋ ದೊಡ್ಡ ಮರಗಳು ಆ ಚಿಕ್ಕ ಜಗದೊಳಗ ಎಲ್ಲಾರೂ ಅನುಸರಿಸಿಕೊಂಡ ಹೋಗೋದಿದೆಯಲ್ಲ ಅದ ಚೆಂದ.  ಅದರಾಗೂ ನಮ್ಮ ಮಂದಿ ಗಾಡಿತೊಗೊಂಡ ಬರಬೇಕ ಅಂತಾರ್ರೀ, ಒಬ್ಬ ಗಾಡಿ ತಂದ್ರ ಇನ್ನೊಬ್ಬ ಕಾರನ ನುಗ್ಗಸ್ತಾನ ನಮ್ಮ ಮಂದಿ ಹಿಂಗರಿ.

ಅರಾಮಾಗಿ ನಡಕೊಂತ ಬಂದರ ಆ ಹಸರ ಮಾರ್ಕೆಟ್ ನೋಡಾಕ ಎರಡ ಕಣ್ಣ ಸಾಲದರಿಪಾ!

ಬೆಳಿಗ್ಗೆ ಬೆಳಿಗ್ಗೆ ಬಂದ್ರ ಮರಾವ್ರದ ಜಟಾಪಟಿ ನಡೆದಿರತತಿ. ನಿಂದ ಜಾಗ ಅಲ್ಲೆ - ನಂದ ಜಾಗ ಇಲ್ಲೇ, ನೋಡ ಇಲ್ಲೇ  ಎಲಿಯಡಿಕೆ ಉಗುಳಿದ್ದ ಗುರುತ ಇನ್ನು ಐತಿ - ಹೋಗ ಆಕಡೆ! ಇನ್ನೊಬ್ಬ ಏ ನಾ ಕಾಟಾ ತಕ್ಕಡಿ ತಂದಿಲ್ಲ - ನೀನು ಇಲ್ಲೇ ಬಾ, ನಿಂದ್ರಾಗ ಇಬ್ಬರು ಸೇರಿ ವ್ಯಾಪಾರ ಮಾಡೋನು ಅಂತ.

ಇದೆಲ್ಲ ಸುಖ ಈಗಿನ ರಿಲಯನ್ಸ್ ಫ್ರೆಶ್ - ಬಿಗ್ ಬಾಸ್ಕೆಟ್ ಅದರಾಗ ಇಲ್ಲಾರೀ!  ಹಳೇ ದೋಸ್ತರ ಸಿಗುವಾಗಿನ ಮಜಾ ಅದೂ ಅಚಾನಕ್ ಯಾರಾದ್ರೂ ಸಿಕ್ಕರ ಇನ್ನು ಮಸ್ತ. ಫೇಸ್ಬುಕ್ ನ್ಯಾಗ ಒಂದು ವರ್ಷದಿಂದ ಜಗಳಾಡ್ತಿದ್ರು ಅಚಾನಕ ಎದುರಿಗೆ ಸಂತ್ಯಾಗ ಸಿಕ್ಕಾಗ - ಒಂದ ನಿಮಿಷದಾಗ ಎಲ್ಲ ಮಾಯ. "ಯಾವಾಗ ಬಂದಿಲೇ ಊರಿಂದ",  ಸಂಜೀಕ ಸಿಗುನಂತ ಗಿರ್ಮಿಟ್ ತಿನ್ನಾಕ ಹೋಗೋನು ಅಂದ್ರ ಮುಗಿತ್ರಿಪಾ ಜಗಳ!

ನಮ್ಮ ಜವಾರಿ ಮಂದಿ ಲೆಕ್ಕಾನಾ ಹಂಗರಿ, ತಿನ್ನೋ ತರಕಾರಿ - ಮಾತು ಎಲ್ಲಾ ಜವಾರಿ - ಹಂಗ ಮನಸೂ ಕೂಡ.

ನಮ್ಮ ಹಾವೇರಿ ಬಗ್ಗೆ ಹೇಳಬೇಕಾದ್ರೆ  ನಮ್ಮ ಸಹಜೀವಿಗಳಂತಿರೋ ವರಾಹಗಳನ್ನ ಹೆಂಗರಿ ಮರೀತೀವಿ! ಅವು ಸಂತೆಗೆ ಬಂದು ತಮ್ಮ ಹಾಜರಿ ಹಾಕಿಲ್ಲ ಅಂದ್ರ ಅದು ಸಂತಿನ ಅಲ್ಲ!

ಅಂತೂ ನಮ್ಮ ಹಬ್ಬದ ಸಂತೆ ಮುಗೀತು - ಮನೆಕಡೆ ಹೊಂಟ್ವಿ - ನೀವು ಬರ್ರಿ ಬಿಡುವಿದ್ದಾಗ ಅದು ಭಾನುವಾರ ಮಾತ್ರ, ೨ ಘಂಟೆ ವರೆಗೂ ಅಷ್ಟರಿಪ!

ರೈತನ ಜೋಪಾನದ ಜವಾರಿಯಿದು!

ಹಸಿರು ಹೊನ್ನೆಲ್ಲ ಬೀದಿಗೆ ಸುರಿದಂತೆ!

ಆರಿಸಿ ಎತ್ತಿಟ್ಟ ತರಕಾರಿ ಸೊಪ್ಪಂತೆ!!

ಕಬ್ಬಿನ ಹಾಲು , ಸೋಡಾ , ಡಾಣಿ ಚೆಕ್ಕುಲಿ

ಹಣ್ಣಿನ ಭರ್ಜರಿ ದೂಡು  ಗಾಡಿ!

ಋತುವಿಗೆ ತಕ್ಕಂತೆ

ಮೈ ಮನಕೆ ಒಪ್ಪುವಂತೆ!

ಹಳೆ ಸ್ನೇಹಿತರ ಜೊತೆ ಒಟ್ಟಾಗಿ ನಡೆದಂತೆ!

ಹೊಸ ಸುದ್ದಿ ವಿನಿಮಯದ ಕಟ್ಟೆಯಂತೆ!

ಮುನಿಸಿಗೂ - ವೈಮನಸಿಗೂ ಸೇತುವೆಯಂತೆ!!

ಬಯಲು ಸೀಮೆಯ ಬಲವೋ!

ಮಲೆನಾಡ ಮೈಸಿರಿಯೋ

ಎರಡರ ಮಧುರ ಸಮ್ಮೇಳನದಂತೆ!

ಹಬ್ಬಿದೆ ಹಾವೇರಿ !!

- ದೀಪು